ಕೊಚ್ಚಿ

ಕೇರಳ ರಾಜ್ಯದ ಒಂದು ಮುಖ್ಯ ಬಂದರು ಮತ್ತು ಪಟ್ಟಣ. ಭಾರತದ ಪಶ್ಚಿಮ ಸಮುದ್ರತೀರದಲ್ಲಿ ಸುಮಾರು 12 ಮೈ. ಉದ್ದ, 1 ಮೈ ಅಗಲ ಇರುವ ಪ್ರಾಯ ದ್ವೀಪದ ಉತ್ತರದ ಕೊನೆಯಲ್ಲಿ, ಉ.ಅ.90 58 5" ಮತ್ತು ಪೂ.ರೇ.760 11' 55" ಮೇಲೆ ಇದೆ. ಜಗತ್ತಿನ ಅತ್ಯಂತ ಸುಂದರ ನೈಸರ್ಗಿಕ ಬಂದರುಗಳಲ್ಲಿ ಇದೊಂದು. ಸುತ್ತಮುತ್ತಣ ವಸತಿಗಳೂ ಸೇರಿ ಕೊಚ್ಚಿಯ ಜನಸಂಖ್ಯೆ 4,38,420 (1971). 

ಕೊಚ್ಚಿ ಇತಿಹಾಸ ಪ್ರಸಿದ್ಧವಾದ ಪಟ್ಟಣ. ಇದು ಅನೇಕ ಶತಮಾನಗಳ ಕಾಲ ಸ್ವತಂತ್ರವಾಗಿದ್ದ ಕೊಚ್ಚಿ ಸಂಸ್ಥಾನದ ಆಡಳಿತಕೇಂದ್ರವಾಗಿತ್ತು. ಇದರ ಪ್ರಾಚೀನ ಇತಿಹಾಸ ಸ್ಪಷ್ಟವಾಗಿಲ್ಲ. ಐತಿಹಾಸಿಕ ದಾಖಲೆ ಸಿಗುವುದು 16ನೆಯ ಶತಮಾನದಿಂದೀಚೆಗೆ ಮಾತ್ರ. ಪೋರ್ಚುಗೀಸ್ ಪರಿಶೋಧಕ ಕವ್ರಾಲನಿಗೆ ಕೊಚ್ಚಿ ಪ್ರಪ್ರಥಮವಾಗಿ ಆಶ್ರಯ ಕೊಟ್ಟು, ಆತನ ದೇಶದವರೊಂದಿಗೆ ವ್ಯಾಪಾರ ಸಂಬಂಧವನ್ನು ಪ್ರಾರಂಭಿಸಿತು. ಪೋರ್ಚುಗೀಸರು ಇಲ್ಲೊಂದು ಕಾರ್ಖಾನೆಯನ್ನು ಆರಂಭಿಸಿದರು. ಆದರೆ ಅಕ್ಕಪಕ್ಕದ ಸಂಸ್ಥಾನಗಳೊಂದಿಗೆ ಕೊಚ್ಚಿಗೆ ಇದ್ದ ವಿರಸವನ್ನುಪಯೋಗಿಸಿಕೊಂಡು ಪೋರ್ಚುಗೀಸರು ಪ್ರಬಲರಾದರು. ಇಲ್ಲಿಯ ಹಿಂದೂ ದೊರೆ ಬಲುಬೇಗ ಅವರ ಕೈಗೊಂಬೆಯಾದ. 1662-63ರ ಸುಮಾರಿಗೆ ಕೊಚ್ಚಿ ಡಚ್ಚರ ಕೈಸೇರಿತು. ಅನಂತರ 18ನೆಯ ಶತಮಾನದಲ್ಲಿ ಇದು ಹೈದರ್‍ಆಲಿಯ ಸಾಮಂತ ರಾಜ್ಯವಾಯಿತು. ಟಿಪ್ಪುಸುಲ್ತಾನನ ಅವನತಿಯ ಅನಂತರ ಕೊಚ್ಚಿ ಬ್ರಿಟಿಷರ ಅಧೀನವಾಗಿ ಆಶ್ರಿತ ಸಂಸ್ಥಾನವಾಯಿತು. ರಾಮವರ್ಮನ (1790-1805) ಆಡಳಿತ ಕಾಲದಲ್ಲಿ ಕೊಚ್ಚಿ ಸಂಸ್ಥಾನದಲ್ಲಿ ಅನೇಕ ಸುಧಾರಣೆಗಳಾದುವು. ಸಂಸ್ಥಾನದಲ್ಲಿದ್ದ ಅನೇಕ ಪಂಗಡಗಳೂ ಒಳಜಗಳಗಳೂ ಬಗೆಹರಿದುವು. ಆಡಳಿತ, ಕೃಷಿ, ನೀರಾವರಿ ಮತ್ತು ವ್ಯಾಪಾರ ಉತ್ತಮಗೊಂಡುವು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ರೂಪುಗೊಂಡ ತಿರುವಾಂಕೂರು-ಕೊಚ್ಚಿ ರಾಜ್ಯದಲ್ಲಿ ಕೊಚ್ಚಿ ವಿಲೀನಗೊಂಡಿತು.								(ಎಸ್.ಎನ್‍ಎಆರ್.)

ಕೊಚ್ಚಿ ಭಾರತದ ಎಂಟು ಪ್ರಮುಖ ಬಂದರುಗಳಲ್ಲೊಂದು. ಇದು ಸರ್ವಋತು ಬಂದರು. ಪೂರ್ವಕ್ಕೆ ಇರುವ ಮುಖ್ಯ ಭೂಮಿಯನ್ನು ಖಾರಿಯೊಂದು ಬೇರ್ಪಡಿಸುತ್ತದೆ. ದಕ್ಷಿಣೋತ್ತರವಾಗಿ ಆಲಪ್ಪುಳದಿ ಕೊಚ್ಚಿಯವರೆಗೆ ಚಾಚಿರುವ ಖಾರಿ ಸು.79 ಚ.ಮೈ ವಿಸ್ತಾರವಾದ್ದು, ಇದಕ್ಕೆ ವೆಂಬನಾಡ್ ಸರೋವರವೆಂದು ಹೆಸರು. 1920-23ರ ಅವಧಿಯಲ್ಲಿ ಇಲ್ಲಿಯ ಬಂದರನ್ನು ಆಧುನಿಕಗೊಳಿಸುವ ಯೋಜನೆಗಳು ಆರಂಭವಾದುವು. ಇಲ್ಲಿ 450' ಉದ್ದದ ನಾಲ್ಕು ಹಡಗುಗಳು ಒಂದೇ ಕಾಲದಲ್ಲಿ ತಂಗಬಹುದು. ಬಂದರನ್ನೀಗ ಇನ್ನೂ ವಿಸ್ತರಿಸಲಾಗುತ್ತಿದೆ. ಇಲ್ಲೊಂದು ಹಡಗುನಿರ್ಮಾಣ ಕೇಂದ್ರ ಸ್ಥಾಪಿತವಾಗಲಿದೆ.

ಕೊಚ್ಚಿ ರೇವು ರೈಲ್ವೆಯ ಮೂಲಕ ದಕ್ಷಿಣ ರೈಲ್ವೆಯ ಬ್ರಾಡ್‍ಗೇಜ್ ಮತ್ತು ಮೀಟರ್ ಗೇಜ್ ರೈಲುಮಾರ್ಗಗಳೊಂದಿಗೆ ಇದಕ್ಕೆ ಸಂಬಂಧ ಕಲ್ಪಿಸಲಾಗಿದೆ. ಇಲ್ಲಿ ರಾಸಾಯನಿಕ ಗೊಬ್ಬರದ ಕಾರ್ಖಾನೆಯೂ ತೈಲಪರಿಷ್ಕರಣ ಕೇಂದ್ರವೂ ಇವೆ. ಕೇರಳದ ಆಮದು ರಫ್ತುಗಳು ಬಹಳ ಮಟ್ಟಿಗೆ ಸಾಗುವುದು ಈ ಬಂದರಿನಿಂದ. ಹಿನ್ನಾಡಿನ ಉತ್ಪನ್ನಗಳಾದ ಚಹ, ಕಾಫಿ, ಮೆಣಸು, ತೆಂಗು, ರಬ್ಬರ್, ಮರದ ದಿಮ್ಮಿ, ತೆಂಗಿನ ನಾರಿನ ವಸ್ತುಗಳು, ಗೋಡಂಬಿ, ಸಾಗರಿಕ ಆಹಾರ, ಅದುರು, ಖನಿಜ ತೈಲೋತ್ಪನ್ನ ಮುಂತಾದುವು ಇಲ್ಲಿಂದ ರಫ್ತಾಗುತ್ತವೆ. ಧಾನ್ಯ, ಖನಿಜ ಪದಾರ್ಥಗಳು, ಪೆಟ್ರೋಲ್, ರಾಸಾಯನಿಕಗಳು ಇವು ಇದರ ಮೂಲಕ ಆಮದಾಗುವ ಮುಖ್ಯ ವಸ್ತುಗಳು. ಕೊಚ್ಚಿಯಲ್ಲಿ ಮುಂಗಾರು ಮಳೆ ಹೆಚ್ಚು. ಸಮುದ್ರತೀರದಲ್ಲಿರುವುದರಿಂದ ಇಲ್ಲಿ ಹವಾಗುಣ ಹಿತಕರವಾಗಿರುತ್ತದೆ.										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ